ಜಪಾನೀ ಜಾನಪದ -
ಜಪಾನಿನ ಆಚಾರ ವಿಚಾರಗಳಲ್ಲಿ ಚೀನ, ಕೊರಿಯ, ಭಾರತಗಳ ಪ್ರಭಾವವಿದ್ದರೂ ಅದು ತನ್ನದೇ ಆದ ಸಂಸ್ಕøತಿಯನ್ನು ರೂಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಅಲ್ಲಿ ದೊರೆಯುವ ಪುರಾಣಗಳು, ನೃತ್ಯಗಳು, ಗೀತೆ, ಕಥೆ, ನಂಬಿಕೆ, ಗಾದೆ ಮತ್ತು ಇನ್ನೂ ಅನೇಕ ಸಾಂಪ್ರದಾಯಿಕ ಪದ್ಧತಿಗಳ ಅಧ್ಯಯನದಿಂದ ಅಲ್ಲಿನ ಜಾನಪದ ಸಂಪತ್ತಿನ ವೈಶಿಷ್ಟ್ಯಗಳನ್ನು ಗುರುತಿಸಬಹುದಾಗಿದೆ.

ವಿಶ್ವದ ಹಾಗೂ ದೈವಗಳ ಹುಟ್ಟಿನ ಬಗ್ಗೆ ಅನೇಕ ಪುರಾಣಗಳು, ಜಪಾನಿನ ಷಿಂಟೋ ಮತ್ತು ಬೌದ್ಧಧರ್ಮಗಳಲ್ಲಿ ದೊರೆಯುತ್ತವೆ.
ವಿಶ್ವದ ಹುಟ್ಟಿನ ಬಗ್ಗೆ ಷಿಂಟೋ ಧರ್ಮದಲ್ಲಿ ಬರುವ ವಿವರಗಳು ಹೀಗಿವೆ : ಕ್ರಿ.ಶ. ಏಳುನೂರ ಹನ್ನೆರಡರಲ್ಲಿ ಬರೆದ ಜಪಾನಿನ ಅತ್ಯಂತ ಪ್ರಾಚೀನ ಪುಸ್ತಕ ಕೊಜಿಕಿಯ ಪ್ರಕಾರ ಏಳು ದೈವಗಳಿಂದ ವಿಶ್ವಸೃಷ್ಟಿ ಆಯಿತು. ಅನಂತರ ಐದು ಜೊತೆ ದಂಪತಿಗಳು ಕಾಣಿಸಿಕೊಂಡರು. ಅವರಲ್ಲಿ ಕೊನೆಯ ಜೋಡಿ ಈಜಾóನಾಗೀ ಮತ್ತು ಈಜಾóನಾಮೀ ಅವರು ಉಳಿದ ದೇವತೆಗಳ ಆದೇಶದ ಮೇರೆಗೆ ಕಷ್ಟದಲ್ಲಿದ್ದ ಭೂಮಿಯ ಸ್ಥಿತಿಯನ್ನು ಸುಧಾರಿಸಲು ಆಭರಣಯುತ ಈಟಿಯನ್ನು ಹಿಡಿದು ಸ್ವರ್ಗದ ತೇಲುವ ಸೇತುವೆಯ (ಕಾಮನಬಿಲ್ಲು) ಮೇಲೆ ಬಂದು ನಿಂತರು. ಕೆಳಗಿದ್ದ ಸಮುದ್ರದಲ್ಲಿ ತಮ್ಮ ಈಟಿಯನ್ನು ಅದ್ದಿ ಮೇಲೆತ್ತಿದಾಗ ಅಂಟಿಕೊಂಡಿದ್ದ ಹನಿಯೊಂದು ಘನೀಭವಿಸಿ ಕೆಳಗೆ ಬಿದ್ದು ಒನೊಗೊರೊ ದ್ವೀಪವಾಗಿ ಪರಿಣಮಿಸಿತು. ಈ ದ್ವೀಪಕ್ಕೆ ಬಂದು ನೆಲಸಿದ ದೇವದಂಪತಿಗಳು ಮತ್ತೆ ಜಪಾನಿನ ಎಂಟು ದ್ವೀಪಗಳಿಗೆ ಜನ್ಮವಿತ್ತರು.

ದೈವಗಳ ಹುಟ್ಟಿನ ಬಗ್ಗೆ ಇದು ಅಲ್ಲಿರುವ ವಿವರ : ಈಜಾóನಾಗೀ ಮತ್ತು ಈಜಾóನಾಮೀಯವರ ಕೊನೆಯ ಮಗು ಅಗ್ನಿದೇವ ಹುಟ್ಟಿದ ಅನಂತರ ಈಜಾóನಾಮೀ ಮರಣ ಹೊಂದಿದಳು. ಅವಳ ಕೊಳೆಯುವ ದೇಹದಿಂದ ಮತ್ತು ಶೋಕ ತಪ್ತನಾದ ಅವಳ ಪತಿ ಈಜಾóನಾಗೀ ಕಣ್ಣೀರಿನಿಂದ ಅನೇಕ ದೈವಗಳು ಜನಿಸಿದುವು. ಪತ್ನಿಯ ಸಾವಿನಿಂದ ಅಸಮಾಧಾನಗೊಂಡ ಈಜಾóನಾಗೀ ತನ್ನ ಮಗ ಅಗ್ನಿದೇವನ ತಲೆ ಕತ್ತರಿಸಿದಾಗ ಚಿಮ್ಮುತ್ತಿದ್ದ ರಕ್ತದಿಂದ ಮತ್ತಷ್ಟು ದೈವಗಳು ಹುಟ್ಟಿದವು. ವಿರಹವೇದನೆಯನ್ನು ತಾಳಲಾರದೆ ಈಜಾóನಾಗೀ ತನ್ನ ಪತ್ನಿಯನ್ನು ಅಧೋಲೋಕವಾದ ಹೇಡೀಜ್óನಲ್ಲಿ ಹುಡುಕಲು ಹೊರಟ. ಅಲ್ಲಿ ಕೊಳೆಯುತ್ತಿದ್ದ ಅವಳ ಭಯಂಕರಸ್ಥಿತಿಯನ್ನು ಕಂಡು ಮತ್ತೆ ಮೇಲು ಲೋಕಕ್ಕೆ ಬಂದು ನದಿಯಲ್ಲಿ ತನ್ನ ಪಾಪವನ್ನು ತೊಳೆಯಲಾರಂಭಿಸಿದಾಗ ಅವನ ಅಂಗಾಂಗಳಿಂದ ಬಟ್ಟೆಬರೆಗಳಿಂದ ಅನೇಕ ದೇವತೆಗಳು ಜನಿಸಿದರು. ಅವನ ಮೂಗಿನಿಂದ ವಾಯುದೇವನಾದ ಸೂಸ-ನಾ-ವಾ, ಬಲಗಣ್ಣಿನಿಂದ ಚಂದ್ರ, ಎಡಗಣ್ಣಿನಿಂದ ಪ್ರಮುಖಳಾದ ಸೂರ್ಯ ದೇವತೆ ಆಮಾತಿರಾಸು ಹುಟ್ಟಿದರು. ಅವಿಧೇಯನಾದ ಸೂಸ-ನಾ-ವಾ, ತಂದೆಯನ್ನು ತ್ಯಜಿಸಿದ. ಸೋದರಿ ಆಮಾತಿರಾಸುವಿನೊಡನೆ ಜಗಳವಾಡಿದ. ಆಕೆ ಕೋಪಗೊಂಡು ಗುಹೆ ಸೇರಿದಾಗ ಜಗತ್ತನ್ನು ಕತ್ತಲೆ ಆವರಿಸಿತು. ಉಳಿದ ದೇವತೆಗಳು ಮತ್ತೆ ಅವಳನ್ನು ಒಂದು ಬಗೆಯ ನೃತ್ಯ ಮತ್ತು ಕನ್ನಡಿಗಳ ಸಹಾಯದಿಂದ ಆಕರ್ಷಿಸಿ ಹೊರಕ್ಕೆ ಬರುವಂತೆ ಮಾಡಿದರು.

ಸೂಸ-ನಾ-ವಾ ತನ್ನ ಸೋದರಿ ಅಮಾತಿರಾಸು ಕೊಟ್ಟಿದ್ದ ಅಭರಣಗಳಿಂದ ಐದು ದೇವರುಗಳನ್ನು ಸೃಷ್ಟಿಸಿದ. ಆಮಾತಿರಾಸು ಸೂಸ-ನಾ-ವಾವಿನ ಕತ್ತಿಯನ್ನು ಮೂರು ಚೂರಾಗಿ ಮುರಿದು ಅಗಿದು ಉಗುಳಿದಾಗ ಮೂರು ದೇವತೆಗಳು ಜನಿಸಿದರು. ಇವರಿಂದ ಸೃಷ್ಟಿಸಲ್ಪಟ್ಟ ಎಂಟು ದೇವತೆಗಳು ಜಪಾನಿನ ಪ್ರಮುಖ ವಂಶಗಳ ಪ್ರವರ್ತಕರಾದರು.

ಸೂಸ-ನಾ-ವಾವಿನ ಚೇಷ್ಟೆಗಳು ಅಧಿಕಗೊಳ್ಳಲು ಉಳಿದ ದೇವತೆಗಳು ಅವನನ್ನು ಸ್ವರ್ಗದಿಂದ ಅಟ್ಟಿದರು. ತನ್ನ ಲೋಕವನ್ನು ಬಿಡುವಾಗ ಅವನು ಅನ್ನ ದೇವತೆಯನ್ನು ಕೊಂದದ್ದರಿಂದ ಅವಳ ಅಂಗಾಂಗಗಳು ಭೂಮಿಯ ಮೇಲೆ ಬಿದ್ದು ಉಪಯುಕ್ತ ಮರಗಿಡಗಳ ಬೀಜಗಳಾದುವು. ಸೂಸ-ನಾ-ವಾವನ್ನು ಕುರಿತ ಇನ್ನೂ ಅನೇಕ ಪುರಾಣಗಳಿವೆ. ಇವನ ವಂಶಜರೇ ಇಜೂóಮೋ ಪ್ರಾಂತ್ಯವನ್ನು ಜಪಾನಿನ ಮೊಟ್ಟಮೊದಲ ಕಲ್ಪಿತ ಚಕ್ರವರ್ತಿಗಿಂತ ಮುಂಚೆ ಆಳುತ್ತಿದ್ದರಂತೆ.

ಸ್ವರ್ಗ ಸಾಮ್ರಾಜ್ಯದಲ್ಲಿ ಶಾಂತಿ ನೆಲಸಿದ ಬಳಿಕ ಆಮಾತಿರಾಸು ಜಪಾನ್ ದ್ವೀಪಗಳ ಮೇಲೆ ತನ್ನ ಗಮನ ಹರಿಸಿದಳು. ಅವಳ ಹಿರಿಯ ಮಗ ನೀನೀಗೀಯೊಂದಿಗೆ ಎಂಟು ಮಂದಿ ದೂತರನ್ನು ಭೂಲೋಕದ (ಜಪಾನ್ ದ್ವೀಪಗಳು) ಆಡಳಿತವನ್ನು ವಹಿಸಿಕೊಳ್ಳಲು ಕಳುಹಿಸಿದಳು. ಇಜೂóಮೋ ಪ್ರಾಂತ್ಯವನ್ನಾಗಲೇ ಆಳುತ್ತಿದ್ದ ಸೂಸ-ನಾ-ವಾವಿನ ಸಂತತಿಯವರು ಆಮಾತಿರಾಸುವಿನ ಅಧಿಕಾರವನ್ನು ಒಪ್ಪಿ ಸ್ವಾಗತಿಸಿದರು. ನೀನೀಗೀ ಕೀಯೂಷೂಗೆ ಬಂದು ಅಲ್ಲಿ ಒಬ್ಬ ಸುಂದರಿಯನ್ನು ವಿವಾಹವಾದ. ಅವನಿಗೆ ಮೂರು ಮಕ್ಕಳಾದರು. ಮೂವರಲ್ಲಿ ಒಬ್ಬ ಸಮುದ್ರ ದೇವನ ಮಗಳನ್ನು ಮುದುವೆಯಾಗಿ ಒಂದು ಗಂಡುಮಗುವಿನ ತಂದೆಯಾದ. ಈ ಮಗು ಬೆಳೆದು ದೊಡ್ಡವನಾಗಿ ತನ್ನ ತಾಯಿಯ ಕಿರಿಯ ತಂಗಿಯನ್ನು ವಿವಾಹವಾದ. ಇವರಿಬ್ಬರಿಗೆ ಜನಿಸಿದವನೇ ರಾಜಕುಮಾರ ಟಾಯಾಮೀಕೇನು. ಇವನು ಜಿಮ್ಮು ಟೆನ್ನೊ ಎಂಬ ಹೆಸರಿನಿಂದ ವಿಧಿಪೂರ್ವಕವಾಗಿ ಕ್ರಿ.ಪೂ. 660ರಲ್ಲಿ ಜಪಾನಿನ ಪ್ರಥಮ ಚಕ್ರವರ್ತಿಯಾದ.

2 ಬೌದ್ಧ ಪುರಾಣಗಳು : ಕೊರಿಯದಿಂದ ಜಪಾನಿಗೆ ಬಂದ ಬೌದ್ಧಮತದಿಂದ ಜಪಾನಿನಲ್ಲಿ ಅನೇಕ ಹೊಸ ಬೌದ್ಧ ದೈವಗಳು ಹುಟ್ಟಿಕೊಂಡವು. ಕಾಲಕ್ರಮೇಣ ಅವುಗಳ ಸುತ್ತ ಅನೇಕ ಪುರಾಣಗಳು ಬೆಳೆದವು. ಷಿಂಟೋಧರ್ಮಕ್ಕೆ ಸೇರಿದ ಎಲ್ಲ ದೇವರುಗಳೂ ಬೌದ್ಧದೇವತೆಗಳ ಪುನರವತಾರವೆಂದು ಪರಿಗಣಿಸಲ್ಪಟ್ಟಿತು. ಸತ್ತ ಅನಂತರದ ಲೋಕಗಳಾದ ಸ್ವರ್ಗ ನರಕಗಳ ಬಗ್ಗೆ ಜಪಾನೀಯರಲ್ಲಿ ಪೂರ್ಣಕಲ್ಪನೆ ಉಂಟಾಗಿದ್ದು ಬೌದ್ಧಮತದಿಂದ. ಬೌದ್ಧಪುರಾಣಶಾಸ್ತ್ರದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ದೈವಗಳೆಂದರೆ ಜಿಜೋó ಮತ್ತು ಕ್ವನ್ನೋನ್.

ಜಿeóÉೂೀದೇವ ಕಷ್ಟನಿವಾರಕ. ಅದರಲ್ಲೂ ಈತ ಸಣ್ಣ ಮಕ್ಕಳ ರಕ್ಷಕ ಮತ್ತು ಪೋಷಕ. ರೋಗಿಗಳನ್ನು ರೋಗದಿಂದ ಮುಕ್ತರನ್ನಾಗಿಸುತ್ತಾನೆ. ಇಹದಲ್ಲಿ ಮಾತ್ರವಲ್ಲ ಪಾತಾಳಲೋಕಕ್ಕೆ ಹೋದಾಗಲೂ ತನ್ನ ಭಕ್ತರನ್ನು ಕಾಪಾಡುತ್ತಾನೆ. ಪಾಪಿಗಳನ್ನು ನರಕದಿಂದ ಸ್ವರ್ಗಕ್ಕೆ ಒಯ್ಯುವ ಶಕ್ತಿ ಈತನಿಗೆ ಇದೆ.

ಕ್ವನ್ನೋನ್ ಮೂಲತಃ ಬೋಧಿಸತ್ವನಾಗಿದ್ದು ಗಂಡುದೇವರಾದರೂ ಚೀನದ ಪ್ರತಿಮಾ ವಿವರಣಶಾಸ್ತ್ರ ಈ ದೇವರನ್ನು ಸ್ತ್ರೀ ಎಂದು ಪರಿಗಣಿಸಿದೆ : ಜಪಾನಿನಲ್ಲಿ ಈತ ದಯಾದೇವತೆ.

ಭಾರತ ಮತ್ತು ಚೀನಗಳ ಪ್ರಭಾವದಿಂದಾಗಿ ಜಪಾನಿನಲ್ಲೂ ಭೂತವಿದ್ಯೆಯಲ್ಲಿ ನಂಬಿಕೆ ಇದೆ. ಅಲ್ಲಿ ಭೂತಗಳನ್ನು ಒನಿ ಎನ್ನುತ್ತಾರೆ. ಐತಿಹ್ಯಗಳಲ್ಲಿ ಜನಪದ ಕಥೆಗಳಲ್ಲಿ ಅದರಲ್ಲೂ ಕಿನ್ನರ ಕಥೆಗಳಲ್ಲಿ ಅನೇಕ ರೂಪಕಗಳಲ್ಲಿ ಭೂತಗಳ ಪಾತ್ರ ಹೆಚ್ಚಾಗಿ ಇರುತ್ತದೆ.

3 ಜನಪದ ಕಥೆಗಳು : ಜಪಾನಿನ ಜನಪದ ಕಥೆಗಳಲ್ಲಿ ಕಿನ್ನರ ಕಥೆಗಳು ಬಹಳಷ್ಟಿವೆ. ಇತರ ದೇಶಗಳ ಜನಪದ ಕಥೆಗಳಲ್ಲಿರುವಂತೆ ಇಲ್ಲಿನ ಕಥೆಗಳಲ್ಲೂ ಪ್ರಾಣಿ-ಪಕ್ಷಿಗಳ ಪಾತ್ರ ಹೆಚ್ಚಾಗಿದೆ. ಆದರೆ ನರಿ ಮತ್ತು ಬ್ಯಾಜರ್ ಎನ್ನುವ ಒಂದು ಜಾತಿಯ ಕರಡಿ ಇಲ್ಲಿನ ಕಥೆಗಲ್ಲಿ ವಿಶೇಶವಾಗಿ ಕಾಣಿಸಿಕೊಳ್ಳುತ್ತವೆ. ಕಥೆಗಳಲ್ಲಿ ನರಿ ಒಂದು ವಿಚಿತ್ರ ಹಾಗೂ ದುಷ್ಟಪ್ರಾಣಿಯಾಗಿದ್ದು ರೂಪವನ್ನು ಯಾವ ಮನುಷ್ಯನ ಆಕಾರಕ್ಕೂ ಅದರಲ್ಲೂ ಸುಂದರ ಹೆಣ್ಣಿನ ರೂಪಕ್ಕೆ ಪರಿವರ್ತಿಸಿಕೊಂಡು ಸುಲಭವಾಗಿ ಮೋಸಗೊಳಿಸುತ್ತದೆ. ನರಿ-ಬೆಂಕಿ ಎಂಬ ಜನಪ್ರಿಯ ಉಕ್ತಿಯೇ ಜಪಾನೀಯರಲ್ಲಿ ಬಳಕೆಯಲ್ಲಿದೆ. ಕೆಲವು ದಯೆಯುಳ್ಳ ನರಿಗಳು ಅನ್ನದೇವನಾದ ಇನರಿಯ ದೂತರೆಂದು ಹೇಳುತ್ತಾರೆ. ಆದರೆ ಅನ್ನದೇವನೂ ಕೆಲವೊಮ್ಮೆ ಇಂಥ ನರಿಗಳಿಂದ ಗಾಬರಿಗೊಳ್ಳುತ್ತಾನಂತೆ. ಬ್ಯಾಜರ್ ಕರಡಿಯನ್ನು ಕುರಿತ ಇಂಥದೇ ಕಥೆಗಳಿವೆ. ನರಿಯ ವಿಶೇಷಣಗಳು ಈ ಪ್ರಾಣಿಗೂ ಉಂಟು.
ಕಿನ್ನರ ಕಥೆಗಳಲ್ಲಿ ಕೆಲವು ಬಹು ಪ್ರಸಿದ್ಧಿ ಪಡೆದಿವೆ. ಮೊಮೊತಾರೊವಿನ ಕಥೆ ಇದು. ಮಗು ಮೊಮೊತಾರೊ ಪೀಚ್ ಮರದ ಕೆಳಗೆ ಇದ್ದುದನ್ನು ಕಂಡ ವೃದ್ಧ ದಂಪತಿಗಳು ಮನೆಗೆ ಕೊಂಡೊಯ್ದು ಬೆಳೆಸುತ್ತಾರೆ. ಬೆಳೆದು ದೊಡ್ಡವನಾದ ಮೇಲೆ ಆತ ದೆವ್ವಗಳ ದ್ವೀಪ ಓನಿಗಷೀಮಕ್ಕೆ ಹೋಗಿ ದೆವ್ವಗಳಿಂದ ಅವುಗಳ ಐಶ್ವರ್ಯವನ್ನು ಕಸಿದುಕೊಂಡು ತನ್ನ ಮೂವರು ಪ್ರಾಣ ಸ್ನೇಹಿತರಾದ ನಾಯಿ, ಕೋತಿ ಮತ್ತು ಜೀವಂಜೀವ ಹಕ್ಕಿ (ಫೆಸೆóಂಟ್)ಯೊಡನೆ ಮನೆಗೆ ಹಿಂದಿರುಗುತ್ತಾನೆ.

ಬಿದಿರು ಕಡಿಯುವವನ ಕಥೆ ಹೀಗಿದೆ: ತಪ್ಪಿಗೆ ಪ್ರಾಯಶ್ಚಿತವಾಗಿ ಚಂದ್ರನ ಹೆಣ್ಣುಮಗು ಭೂಮಿಯ ಒಂದು ಕಾಡಿನಲ್ಲಿ ಬಂದು ಬೀಳುತ್ತದೆ. ಮಗು ಬಿದಿರು ಕಡಿಯುವವನಿಗೆ ಸಿಕ್ಕಿ ಅವನಲ್ಲಿ ಬೆಳೆದು ದೊಡ್ಡವಳಾಗುತ್ತಾಳೆ. ಮದುವೆ ಮಾಡಲು ನಿಶ್ಚಯಿಸಿದಾಗ ಚಕ್ರವರ್ತಿಯೂ ಸೇರಿದಂತೆ ಅನೇಕ ವರಗಳನ್ನು ತಿರಸ್ಕರಿಸಿ ಕೊನೆಗೆ ಒಂದು ನಿರ್ದಿಷ್ಟ ಗಳಿಗೆಯಲ್ಲಿ ಚಂದ್ರನನ್ನು ಸೇರುತ್ತಾಳೆ. ಮಾಟ್ಸುಯಾಮಾನ ಕನ್ನಡಿ, ಕಿಂಟರೊ ಕಥೆಗಳೂ ಹೆಚ್ಚು ಪ್ರಸಿದ್ಧವಾದುವು.

4 ಹಬ್ಬಗಳು : ಪ್ರಾಚೀನ ಜಪಾನೀ ಸಾಂಪ್ರದಾಯಿಕ ಹಬ್ಬಗಳಲ್ಲಿ ಕೆಲವು ಚೀನದಲ್ಲಿ ಹುಟ್ಟಿದುವಾಗಿವೆ. ಜಪಾನಿನಲ್ಲಿ ಐದು ಹಬ್ಬಗಳು ಬಹು ಪ್ರಮುಖ : 1 ನನಕುಶ ಅಥವಾ ಏಳು ಹುಲ್ಲುಗಳ ಹಬ್ಬ. ಇದನ್ನು ಪ್ರತಿ ಜನವರಿ ಏಳರಂದು ಆಚರಿಸುತ್ತಾರೆ. ಏಳು ಜಾತಿಯ ಹುಲ್ಲು ಮತ್ತು ಅಕ್ಕಿಯ ಗಂಜಿಯಿಂದ ತಯಾರಿಸಿದ ಒಂದು ಬಗೆಯ ಭಕ್ಷ್ಯವನ್ನು ಸೇವಿಸುವುದರಿಂದ ಆ ವರ್ಷ ಕಾಯಿಲೆಗಳು ಬರುವುದಿಲ್ಲ ಎಂದು ನಂಬಿಕೆ. 2 ಹಿನಮತ್ಸೂರಿ ಎಂಬುದು ಪ್ರತಿ ಮಾರ್ಚ್ ಮೂರರಂದು ಆಚರಿಸುವ, ಹುಡುಗಿಯರ ಹಬ್ಬ. ಚಕ್ರವರ್ತಿಗಳ ರಾಣಿಯರ ಬೊಂಬೆಗಳನ್ನು ಟೊಕೊನೊಮದಲ್ಲಿಟ್ಟು (ಜಪಾನಿನಲ್ಲಿ ಪ್ರತಿಮನೆಯಲ್ಲೂ ಇರುವ ಗೂಡು) ಅವುಗಳಿಗೆ ಎಡೆ ಇಡುತ್ತಾರೆ. ಹಿರಿಯರು ಹೆಣ್ಣು ಮಕ್ಕಳನ್ನು ಕೂರಿಸಿಕೊಂಡು ಜಪಾನಿನ ಆದರ್ಶ ಹೆಣ್ಣುಗಳ ಬಗ್ಗೆ ಇರುವ ಕಥೆಗಳನ್ನು ಹೇಳುತ್ತಾರೆ. 3 ಟನಬಟ ಹಬ್ಬವನ್ನು ಜುಲೈ ಏಳರಂದು ಆಚರಿಸುತ್ತಾರೆ. ಇದು ನೇಯ್ಗೆಯವರ ಹಬ್ಬ. ಚೀನದಲ್ಲಿ ಹುಟ್ಟಿದ್ದು. 4 ಟನಗೊನೊಸೆಕ್ಕು ಮೇ ಐದರಂದು ಆಚರಿಸುವ ಮತ್ತೊಂದು ಹುಡುಗರ ಹಬ್ಬ. ಏಳು ವರ್ಷದಿಂದ ಕೆಳಪಟ್ಟು ಇರುವ ಮಕ್ಕಳ ಮನೆಗಳಲ್ಲಿ ಇದನ್ನು ಆಚರಿಸುತ್ತಾರೆ. ಉದ್ದವಾದ ಕಂಬಕ್ಕೆ ಕಾಗದದಿಂದ ಮಾಡಿದ ಕಾರ್ಪ್ (ಸಿಹಿ ನೀರಿನಲ್ಲಿರುವ ಒಂದು ಜಾತಿ ಮೀನು) ಮೀನನ್ನು ತೂಗು ಬಿಡುತ್ತಾರೆ. ಈ ಜಾತಿಯ ಮೀನು ಕೂಡಿಕೆ ಸಂದರ್ಭ ಬಂದಾಗ ಜಲಪಾತದ ಎದುರಿಗೂ ಈಜಬಲ್ಲ ಶಕ್ತಿ ಉಳ್ಳದ್ದರಿಂದ ಇದು ಶಕ್ತಿ ಮತ್ತು ಪುರುಷಲಕ್ಷಣದ ಸಂಕೇತವಾಗಿದೆ. ಅನಂತರ ಪುರಾತನ ಯೋಧರ ಮತ್ತು ಪ್ರಮುಖ ವೀರನಾಯಕರುಗಳ ಬೊಂಬೆಗಳನ್ನು ಟೊಕೊನೊಮದಲ್ಲಿಟ್ಟು ಪೂಜಿಸುತ್ತಾರೆ. ಹುಡುಗರನ್ನು ಕೂರಿಸಿಕೊಂಡು ಜನಪ್ರಿಯ ಶೂರರಿಗೆ ಹಾಗೂ ಆಯುಧಗಳಿಗೆ ಸಂಬಂಧಿಸಿದ ಕಥೆಗಳನ್ನು ಹೇಳುತ್ತಾರೆ. 5 ಚೊಯೊ ಅಥವಾ ಸೇವಂತಿಗೆ ಹಬ್ಬವನ್ನು ಸೆಪ್ಟಂಬರ್ ಒಂಬತ್ತರಂದು ಆಚರಿಸುತ್ತಾರೆ. ಈ ಹಬ್ಬದಲ್ಲಿ ಸೇವಂತಿಗೆ ಹೂವಿನ ಪ್ರದರ್ಶನವಿರುತ್ತದೆ.
ಈ ಐದು ಹಬ್ಬಗಳಲ್ಲದೆ ಇನ್ನೂ ಬೇರೆ ಹಬ್ಬಗಳಿವೆ. ಹೊಸವರ್ಷದ ಹಬ್ಬವನ್ನು ಮೂರು ದಿವಸಗಳವರೆಗೆ ಆಚರಿಸುತ್ತಾರೆ. ವಯಸ್ಕರು ಪ್ರತಿ ಹೊಸವರ್ಷದ ಮೊದಲ ದಿನವನ್ನು ತಾವು ಹುಟ್ಟಿದ ಹಬ್ಬವೆಂದು ತಿಳಿಯತ್ತಾರೆ. ಈ ಮೂರು ದಿವಸಗಳಲ್ಲಿ ಜನ ದೇವಸ್ಥಾನಕ್ಕೆ ಹೋಗುವುದು, ಹರಕೆ ಸಲ್ಲಿಸುವುದು, ವಿವಿಧ ಭಕ್ಷ್ಯಗಳನ್ನು ತಯಾರುಮಾಡುವುದು, ಮೊದಲ ಕನಸು ಕಾಣುವುದು-ಇವುಗಳಲ್ಲಿ ನಿರತರಾಗುತ್ತಾರೆ. ಮೊದಲ ಕನಸು ಕಾಣಲು ಟಕರಬ್ಯೂನ್‍ನ ಚಿತ್ರವನ್ನು ಜನವರಿ ಮೂರರ ರಾತ್ರಿ ತಲೆದಿಂಬನ ಕೆಳಗೆ ಇಟ್ಟು ಮಲಗುತ್ತಾರೆ. ಅಂದು ಕಂಡ ಕನಸು ಅವರಿಗೆ ದೈವವಾಣಿಯಾಗುತ್ತದೆ. ಫೂಜೀ ಪರ್ವತವನ್ನು ಕಾಣುವುದು ಶುಭ ಹಾಗೂ ಉತ್ತಮ ಎಂದು ಭಾವಿಸುತ್ತಾರೆ.

ಓಬೊನ್ ಅಥವಾ ದೀಪಗಳ ಹಬ್ಬವನ್ನು ಜುಲೈ ಹದಿಮೂರರಿಂದ ಹದಿನಾರರವರೆಗೆ ಆಚರಿಸುತ್ತಾರೆ. ಸತ್ತವರ ಆತ್ಮಗಳು ಈ ಹಬ್ಬದಲ್ಲಿ ಬರುತ್ತವೆ ಎಂಬ ನಂಬಿಕೆ ಇರುವುದರಿಂದ ಒಳ್ಳೆಯ ಭಕ್ಷ್ಯಗಳನ್ನು ಮಾಡಿ ಅವುಗಳಿಗೆ ಅರ್ಪಿಸುತ್ತಾರೆ. ಪ್ರತ್ಯೇಕ ದೀಪಗಳನ್ನು ಹಚ್ಚುವುದರಿಂದ ಆತ್ಮಗಳಿಗೆ ಮಾರ್ಗ ಕಾಣುವುದೆಂದು ನಂಬುತ್ತಾರೆ. ಬೌದ್ಧಭಿಕ್ಷುಗಳು ಮನೆಯಿಂದ ಮನೆಗೆ ಹೋಗಿ ಸತ್ತವರ ಆತ್ಮಕ್ಕೆ ಯೋಗ್ಯಸೇವೆ ಸಲ್ಲಿಸುತ್ತಾರೆ.

ಫೆಬ್ರುವರಿ ಮೂರರಂದು ಆಚರಿಸುವ ಸೆಟ್‍ಸುಬುನ್ ಎಂಬ ಹಬ್ಬದಲ್ಲಿ ಜನ ಸಾಯಂಕಾಲ ಅವರ ವಯಸ್ಸಿನಷ್ಟು ಹುರುಳಿಬೀಜವನ್ನು ಎತ್ತಿಕೊಂಡು ಅದೃಷ್ಟ ಬರಲಿ, ಅನಿಷ್ಟ ತೊಲಗಲಿ ಎಂದು ಕೂಗುತ್ತ ಎರಚುತ್ತಾರೆ.

5 ಗಾದೆಗಳು : ಜಪಾನೀಯರ ಚತುರತೆ ಹಾಗೂ ವಿವೇಕಗಳನ್ನು ಅವರಲ್ಲಿರುವ ಗಾದೆಗಳಲ್ಲಿ ಕಾಣುಬಹುದು. ಕನ್ನಡ ಗಾದೆಗಳನ್ನು ಹೋಲುವ ಕೆಲವು ಅವರಲ್ಲೂ ಇವೆ. ಉದಾ : ಮನಸ್ಸಿನ ಭೂತ ತನ್ನನ್ನೇ ತೆಗಳಿತು ಎಂಬ ಜಪಾನಿನ ಗಾದೆ ತನ್ನ ವಿಷ ತನ್ನನ್ನೇ ತಿಂದಿತು ಎಂಬ ಕನ್ನಡ ಗಾದೆಯಂತಿದೆ. ಅಳುವ ಮುಖಕ್ಕೆ ಒಂದು ಜೇನುಹುಳು (ಕಷ್ಟಗಳು ಬರುವಾಗ ಒಟ್ಟಿಗೆ ಬರುತ್ತವೆ ಎಂದರ್ಥ); ಎಲ್ಲಿ ಅನುಕೂಲವಿದೆಯೊ ಅಲ್ಲಿ ಅನನುಕೂಲವಿದೆ; ಇರುವೆಯ ಆಸೆಯೂ ಸ್ವರ್ಗವನ್ನು ತಲಪುತ್ತದೆ; ಬೆನ್ನಿಗೆ ಕಣ್ಣಿಲ್ಲ; ಜ್ಯೋತಿ ತಾ ಉರಿದು ಬೇರೆಯವರಿಗೆ ಬೆಳಕಾಯಿತು; ಕುರುಡನಿಗೆ ಕನ್ನಡಿ; ಪೂಜಾರಿಗೆ ಬಾಚಣಿಗೆ; ಕಪ್ಪೆ-ಕಪ್ಪೆಗಳಿಗೇ ಜನ್ಮಕೊಡುತ್ತದೆ; ಸೇರುವುದು ಬೇರೆಯಾಗುವುದಕ್ಕೆ-ಇತ್ಯಾದಿ ಜಪಾನೀ ಗಾದೆಗಳು ಸರಳವಾಗಿ ನಿತ್ಯಸತ್ಯವನ್ನು ನುಡಿಯುತ್ತವೆ.

6 ನಂಬಿಕೆಗಳು : ಅದೃಷ್ಟ ದುರದೃಷ್ಟಗಳನ್ನು ತರುವ ವಸ್ತುಗಳ ಬಗ್ಗೆ, ಸ್ಥಳಗಳನ್ನು ಕುರಿತಂತೆ ಅನೇಕ ನಂಬಿಕೆಗಳು ಜಪಾನಿನಲ್ಲಿವೆ. ಯಾವುದೊ ಒಂದು ರಾಶಿಗೆ ಸೇರಿದವರು ಗುರುವಾರ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಬಾರದೆಂದೂ ಮೊದಲ ವರ್ಷದಲ್ಲಿ ಹುಟ್ಟಿದವನಿಗೆ ವ್ಯಾಘ್ರನ ದಿನ ಒಳ್ಳೆಯದಲ್ಲವೆಂದೂ ಹೇಳುವುದುಂಟು. ಈಶಾನ್ಯ ದಿಕ್ಕು ಕೆಟ್ಟದ್ದು. ಏಕೆಂದರೆ ಆ ದಿಕ್ಕಿನಿಂದಲೇ ದೆವ್ವಗಳು ಪ್ರವೇಶಮಾಡುತ್ತವೆ ಎಂದು ಅಲ್ಲಿನ ನಂಬಿಕೆ. ಅನೇಕ ವೈಯಕ್ತಿಕ ನಂಬಿಕೆಗಳು ಜಪಾನಿನಲ್ಲಿವೆ. ಒಂದು ಕಟ್ಟಡ ಬಿದ್ದುಹೋದರೆ ಕಟ್ಟಡದ ದುರದೃಷ್ಟವೆಂದೋ ಅಥವಾ ಕಟ್ಟಡದ ನಿವೇಶನ ಕೆಟ್ಟದ್ದೆಂದೋ ಹೇಳುತ್ತಾರೆ.
ಹತ್ತೊಂಬತ್ತು, ಮೂವತ್ತಮೂರು, ನಲವತ್ತೆರಡು, ನಲವತ್ತೇಳನೆಯ ವರ್ಷಗಳು ವ್ಯಕ್ತಿಯ ವಯಸ್ಸಿನಲ್ಲಿ ಕೆಡಕು ತರುತ್ತವೆಯಂತೆ. ಈ ಅಂಕಿಗಳ ಉಚ್ಚಾರಣೆ ಜಪಾನೀಯರಲ್ಲಿ ಬೇರೆ ಅರ್ಥವನ್ನು ಕೊಡುತ್ತದೆ. ಉದಾ : ನಲವತ್ತೆರಡು ಅಂಕಿಯನ್ನು ಸೂಚಿಸುವ ಷೀ-ನೀ ಎಂಬ ಪದಕ್ಕೆ ಮರಣ ಎಂತಲೂ ಅರ್ಥವಾಗುತ್ತದೆ. ವಿವಾಹ ನಿಶ್ಚಯವಾಗುವುದಕ್ಕಿಂತ ಮುಂಚೆ ರಾಶಿ, ಗಣ ಜಾತಕಗಳ ಬಗ್ಗೆ ಜೋತಿಷ್ಯರನ್ನು ಕೇಳುತ್ತಾರೆ. 'ಜಾಲಾಶ್ವದ ವರ್ಷದಲ್ಲಿ ಜನಿಸಿದವಳನ್ನು ಮದುವೆಯಾದರೆ ಅವಳು ತನ್ನ ಗಂಡನನ್ನು ದಹಿಸುತ್ತಾಳಂತೆ. ಅಂಥವಳನ್ನು ಯಾರೂ ಮದುವೆಯಾಗುವುದಿಲ್ಲ.

ಜಪಾನೀಯರು ಊಟಕ್ಕೆ ಎರಡು ಬಟ್ಟಲು ಅನ್ನಕ್ಕಿಂತ ಕಡಿಮೆ ಹಾಕಿಸಿ ಕೊಳುವುದಿಲ್ಲ. ಏಕೆಂದರೆ ಒಂದು ಬಟ್ಟಲು ಅನ್ನ ಸತ್ತವರ ಆತ್ಮಕ್ಕೆ ಉಣಿಸಿದಂತೆ ಎಂದು ಅವರ ನಂಬಿಕೆ.

ಕಾಯಿಲೆಗೆ ಸಂಬಂಧಿಸಿದ ಕೆಲವು ವಿಚಿತ್ರ ಪದ್ಧತಿಗಳು ಬಳಕೆಯಲ್ಲಿವೆ. ಚರ್ಮ ರೋಗದಿಂದ ನರಳುತ್ತಿದ್ದರೆ ಹುಲ್ಲಿನಿಂದ ಮಾಡಿದ ಒಂದು ದೊಡ್ಡ ಟೋಪಿಯನ್ನು ನದಿಯ ಅಥವಾ ಕೊಳದ, ಸಮುದ್ರದ ನೀರಿಗೆ ತೇಲಿಬಿಟ್ಟರೆ ರೋಗ ಟೋಪಿಯೊಡನೆ ಹೊರಟುಹೋಗುತ್ತದೆ ಎಂದು ನಂಬಿಕೆ. ಷಿಂಟೊ ಧರ್ಮದ ಪ್ರಕಾರ ಅಶುಚಿ ದುರದೃಷ್ಟನನ್ನಾಗಿ ಮಾಡುತ್ತದೆ ಎಂಬ ನಂಬಿಕೆಯಿರುವುದರಿಂದ ಜಪಾನೀಯರು ಶುಚಿತ್ವಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಸ್ವಚ್ಛಮಾಡಲು ಉಪ್ಪನ್ನು ಬಳಸುತ್ತಾರೆ.
ಮಧ್ಯಯುಗದಲ್ಲಿ ಕೆಲವೆಡೆ ಪ್ರಚಲಿತವಿದ್ದ ಅರ್ಥರಹಿತ ಮಂತ್ರಮಾಟದ ಸೂತ್ರ ಅಬ್ರಕಡಬ್ರದಂತೆ ಜಪಾನೀಯರಲ್ಲೂ ಕೆಲವು ಯಕ್ಷಿಣಿ ಸೂತ್ರಗಳಿವೆ. ಉದಾ : ಹಾವು ಕಂಡಾಗ ಅಬುರಉನ್‍ಕೆನ್‍ಸೊವಕ-ಎಂದು ಉಚ್ಚರಿಸಿದರೆ ಅದು ಮಾಯವಾಗುತ್ತದಂತೆ.
7 ಗೀತೆಗಳು ಮತ್ತು ವಾದ್ಯಗಳು : ಜಪಾನಿನ ಮೂರು ಮುಖ್ಯ ವಾದ್ಯಗಳನ್ನು ಸನ್‍ಕ್ಯೊಕು ಎನ್ನುತ್ತಾರೆ. ಅವು ಸಮಿಸೆನ್, ಕೋಟೋ ಮತ್ತು ಷಕುಹಚಿ, ಮೊದಲನೆಯದು ಮೂರು ತಂತಿಯ ಗಿಟಾರ್‍ನಂತೆ ಇದ್ದು, ಅದನ್ನು ದೊಡ್ಡ ಮೊನಚಾದ ಕಡ್ಡಿಯಿಂದ ಮೀಟುತ್ತಾರೆ. ಕೋಟೋ ಹೆಚ್ಚು ಧ್ವನಿಸುವ ಹದಿಮೂರು ತಂತಿಗಳ ವಾದ್ಯ. ಷಕುಹಚಿ ಬಿದರಿನ ಕೊಳವೆಯಿಂದ ಮಾಡಿದ ಕೊಳಲು ರೀತಿಯ ವಾದ್ಯ. ಇವಲ್ಲದೆ ತಮಟೆ, ಬಿವ ಮತ್ತು ನಾಲ್ಕು ತಂತಿಯ ಕಿನ್ನರಿ (ಲೈರ್) ವಾದ್ಯಗಳೂ ಬಳಕೆಯಲ್ಲಿವೆ. ಜಪಾನೀ ಸಂಗೀತ ಚೀನೀ ಹಾಗೂ ಕೊರಿಯವರ ಸಂಗೀತವನ್ನು ಹೋಲುತ್ತದೆ.

ಜಪಾನೀಯರಿಗೆ ಹಾಡುವುದರಲ್ಲಿ ಹೆಚ್ಚು ಆಸಕ್ತಿ. ವಿವಿಧ ಬಗೆಯ ಜನಪದ ಗೀತೆಗಳನ್ನು ವಿವಿಧ ರೀತಿಯ ರಾಗಗಳಲ್ಲಿ ಹಾಡುತ್ತಾರೆ. ಜನಪದ ಗೀತೆಗಳನ್ನು ಮಿನ್‍ಯೋ ಎನ್ನುತ್ತಾರೆ. ಈ ಹಾಡುಗಳನ್ನು ವಾದ್ಯವಿಶೇಷಗಳೊಂದಿಗೊ ಕೈ ಚಪ್ಪಾಳೆ ತಟ್ಟಿಕೊಂಡೊ ಕೇಕೆ ಹಾಕಿಕೊಂಡೊ ಹಾಡುತ್ತಾರೆ.

ಭೂಮಿ ಆಗೆಯುವಾಗ ಹಾಡುವ ಗೀತೆಗಳನ್ನು ಡೊಟ್‍ಸುಕಿ ಅಥವಾ ಜಿಟ್ಸುಕಿ-ಉತ ಎನ್ನುತ್ತಾರೆ. ರಸ್ತೆಮಾಡುವಾಗ, ಕಟ್ಟಡಗಳ ತಳಹದಿ ಮಾಡುವಾಗ ದಸಿದೂಲಗಳನ್ನು ನೆಡುವ ಯಂತ್ರಗಳನ್ನು ನಡೆಸುವಾಗ ಈ ವಿಧದ ಗೀತೆಗಳನ್ನು ಹಾಡುತ್ತಾರೆ. ಕಂಬಗಳನ್ನು ಎತ್ತುವಾಗ ಹಗ್ಗ ಎಳೆಯುವಾಗ ಪ್ರಾಸಬದ್ಧವಾಗಿ ಗುಂಪಿನ ನಾಯಕ ಹಾಡುತ್ತಾನೆ. ಕೆಲವೊಮ್ಮೆ ಇಂಥ ಪ್ರಾಸಬದ್ಧ ಹಾಡುಗಳು ದೊಡ್ಡ ಕಥೆಗಳಾಗಿರುತ್ತವೆ.

ದೊಡ್ಡ ಕಲ್ಲುಗಳನ್ನು ತಿರುಗಿಸುವಾಗ, ಎಳೆಯುವಾಗ ಹಾಡುವ ಗೀತೆಗಳಿಗೆ ಇಷಿ-ಹಿಕಿ-ಉತ ಎನ್ನುತ್ತಾರೆ. ಕುದುರೆ ಸವಾರಿಯ ಹಾಡುಗಳು (ಉಮಕತ-ಬುಷಿ) ಸಂದರ್ಭಕ್ಕೆ ತಕ್ಕಂತೆ ಇರುತ್ತವೆ. ಉದಾ : ಮದುವೆಯಲ್ಲಿ ವಧುವನ್ನು ಕುದುರೆಯ ಮೇಲೆ ಕೂರಿಸಿ ಅವಳ ಮನೆಗೆ ಕರೆದೊಯ್ಯುವಾಗ ಹಾಡುವುದನ್ನು ಬೇರಾವ ಸಂದರ್ಭದಲ್ಲೂ ಹಾಡುವುದಿಲ್ಲ. ಶೋಕಗೀತೆಗಳನ್ನು (ಓ ಇವಕೆ ಬುಷಿ) ಕುದುರೆ ಸವಾರರು ಹೆಣದ ಮೆರವಣಿಗೆಯಲ್ಲಿ ಹಾಡುತ್ತಾರೆ. ಮರ ಕೊಯ್ಯುವವರ ಹಾಡುಗಳನ್ನು ಕಿಯಾರಿ-ಉತ ಎನ್ನುತ್ತಾರೆ.

ಮೀನುಗಾರರ ಹಾಡುಗಳಿಗೆ ಫುನ-ಉತ ಎಂದು ಹೆಸರು. ಬಲೆ ಬೀಸುವಾಗ, ದೋಣಿ ನಡೆಸುವಾಗ, ಬಲೆ ಎಳೆಯುವಾಗ ಇಂಥ ಹಾಡುಗಳನ್ನು ಹೇಳುತ್ತಾರೆ. ಪ್ರಣಯ, ಬೇಟೆ, ಅದೃಷ್ಟ ಇವೇ ಮುಂತಾದ ವಿಷಯಗಳನ್ನು ಇವು ಒಳಗೊಂಡಿರುತ್ತವೆ. ಮೀನು ಬೇಟೆ ಉತ್ಕøಷ್ಟವಾದರೆ ಸಮಾರಂಭವನ್ನು ಆಚರಿಸಿ ಹಾಡುವ ಪದಗಳಿಗೆ ಟಇರ್‍ಯೊ-ಬುಷಿ ಎಂದು ಹೆಸರು.
ವ್ಯವಸಾಯಕ್ಕೆ ಸಂಬಂಧಿಸಿದ ಅನೇಕ ಜನಪದ ಗೀತೆಗಳುಂಟು. ಬತ್ತ ನಾಟಿ ಮಾಡುವಾಗ ಟೀ ಬಿಡಿಸುವಾಗ ನೆಡುವಾಗ ಹಾಡುತ್ತಾರೆ. ಬತ್ತದ ಬೆಳೆಗೆ ಸಂಬಂಧಿಸಿದಂತೆ ಹಾಡುವ ಗೀತೆಗಳನ್ನು ಟ-ಉಎ-ಉತ ಎನ್ನುತ್ತಾರೆ. ಕಣದ ಹಬ್ಬದಲ್ಲಿ ನೃತ್ಯಮಾಡಿಕೊಂಡು ವಾದ್ಯಗಳೊಂದಿಗೆ ಹಾಡುವುದುಂಟು. ಈ ಸಮಾರಂಭದಲ್ಲಿ ಬತ್ತ ನಾಟಿಮಾಡುವ ಅನುಕರಣೆ ನೃತ್ಯಗಳಾದ ಡೆಮ್‍ಬು ಅಥವಾ ಟ-ಮೈಯೊಂದಿಗೆ ಹಾಡುತ್ತಾರೆ. ಕಳೆಕೀಳುವ ಪದಗಳು ಕುಸತೊರಿ-ಉತ ತಾಳಕ್ಕೆ ತಕ್ಕಂತೆ ಇರುತ್ತವೆ. 
ರೇಷ್ಮೆ ಕೆಲಸಕ್ಕೆ ಸಂಬಂಧಿಸಿದ ಹಾಡುಗಳನ್ನು ಹಟ-ಒರಿ-ಉತ ಎನ್ನುತ್ತಾರೆ. ಎಲೆ ಕೀಳುವುದರಿಂದ ಬಟ್ಟೆ ತಯಾರಾಗುವವರೆಗೂ ವಿವಿಧ ಹಂತಗಳ ಬೇರೆಬೇರೆ ಗೀತೆಗಳಿವೆ. ಕೊ-ಉತ ಪದಗಳನ್ನು ಹಳ್ಳಿಯ ಹಬ್ಬಗಳಲ್ಲಿ ನಡೆಯುವ ನೃತ್ಯಗಳೊಂದಿಗೆ ಹಾಡುತ್ತಾರೆ. ಸಣ್ಣ ಕೊಳಲು, ತಮಟೆ ಅಥವಾ ಗಂಟೆ ಇಲ್ಲಿನ ಸಾಮಾನ್ಯ ವಾದ್ಯಗಳು. ಭೋಜನಕೂಟದ ಹಾಡುಗಳು ಕೆಲವೊಮ್ಮೆ ಆರು ಸ್ವರಗಳಿಂದ ಕೂಡಿರುತ್ತವೆ. ಇದನ್ನು ರೊಕುಚೊಸಿ ಎನ್ನುತ್ತಾರೆ.

ಹೆಚ್ಚು ಜೀವಂತವಾಗಿರುವ ಜನಪದ ಗೀತೆಗಳು ಬೋನ್-ಒಡೊರಿ-ಉತ ಅಥವಾ ಒ-ಬೊನ್ ಹಬ್ಬದ ಹಾಡುಗಳು. ಹಬ್ಬದ ಸಾಯಂಕಾಲ ನೃತ್ಯದೊಂದಿಗೆ ಗೀತೆಗಳನ್ನು ಹಾಡುತ್ತಾರೆ. ಈ ಬಗೆಯ ನೃತ್ಯ ಬಹು ಪ್ರಾಚೀನ ಬಗೆಯದು. ನೃತ್ಯ ನಡೆಯುವಾಗ ಲೈಂಗಿಕ ವಿಷಯಗಳಲ್ಲಿ ಸಡಿಲಿಕೆ ಇರುತ್ತದೆ. ಯುವಕ ಯುವತಿಯರ ಪ್ರಣಯಗಳಿಗೆ ಅವಕಾಶ ಉಂಟು. ಹಾಡುಗಳಲ್ಲಿ ಲೈಂಗಿಕ ವಿಷಯ ಪ್ರಧಾನವಾಗಿದ್ದು ಶುಭಕೋರುವ ಮತ್ತು ಇತರೆ ವಿಷಯಗಳು ಅಲ್ಪಸ್ವಲ್ಪವಿರುತ್ತವೆ.
ಸಿಂಹನೃತ್ಯ ಮತ್ತು ಮೂಕವೇಷಕ್ಕೆ ಸಂಬಂಧಿಸಿದ ಹೊಸವರ್ಷದ ಹಾಡುಗಳನ್ನು ಷಿಷಿ-ಮೈ ಮತ್ತು ಪಿಷಿ-ಒಡೊರಿ ಎನ್ನುತ್ತಾರೆ. ಈ ಹಾಡುಗಳು ಶುಭಕೋರುವವುಗಳಾಗಿರುತ್ತವೆ. 

ಧಾರ್ಮಿಕ ಹಾಡುಗಳಾದ ಕಮಿ-ಉತಗಳನ್ನು ಜಪಾನಿನ ಷಿಂಟೋ ಧರ್ಮದ ದೇವಸ್ಥಾನಗಳಲ್ಲಿ ಹಾಡುತ್ತಾರೆ. 
ಬೌದ್ಧರ ಮಂಗಳಹಾಡು ನೆಂಬುತ್ಸು ಮತ್ತು ಮಂತ್ರ ವ-ಸನ್‍ಗಳಿಂದ ಅನೇಕ ಅಸಂಗತ ಹಾಡುಗಳು ಹುಟ್ಟಿಕೊಂಡಿವೆ.
ಮಕ್ಕಳ ಹಾಡುಗಳು (ಡು-ಯೊ) ಮತ್ತು ಲಾಲಿಪದಗಳು (ಕೊಮರಿ-ಉತ) ಮಿನ್-ಯೊ ಗೀತೆಗಳಿಂದ ಬೇರೆಯಾಗಿದ್ದು, ರೂಪ ಮತ್ತು ವಸ್ತುವಿನಲ್ಲಿ ಸರಳ ಹಾಗೂ ಪ್ರಾಸಬದ್ಧವಾಗಿವೆ. ಚಂದ್ರ, ಮಿಂಚುಹುಳು ಮುಂತಾದುವುಗಳ ಬಗ್ಗೆ ಅಲ್ಲದೆ ದೀರ್ಘ ಸರಳಕಥೆಗಳನ್ನು ಈ ರೀತಿಯ ಗೀತೆಗಳು ಒಳಗೊಂಡಿರುತ್ತವೆ. ಹಗ್ಗ ಜಿಗಿಯುವಾಗ, ಚಂಡು ಆಡುವಾಗ ಇಲ್ಲವೆ ಏನೂ ಆಟವಿಲ್ಲದಾಗ ಸುಮ್ಮನೆ ಚಪ್ಪಾಳೆ ತಟ್ಟಿಕೊಂಡು ಮಕ್ಕಳು ಹಾಡಿಕೊಳ್ಳುತ್ತಾರೆ.

ಕೆಲವು ಆಧುನಿಕ ಜನಪದ ಗೀತೆಗಳು (ಷಿನ್-ಮಿನ್-ಯೊ) ಜನಪದರಿಂದ ಹುಟ್ಟಿದುವುಗಳಲ್ಲವಾದರೂ ಪ್ರಮುಖ ಬರೆಹಗಾರರಿಂದ ರಚಿಸಲ್ಪಟ್ಟು ಹೆಚ್ಚು ಜನಪ್ರಿಯವಾಗಿವೆ.

8 ಮದುವೆ ಮತ್ತು ಅಂತ್ಯಕ್ರಿಯಾಪದ್ಧತಿಗಳು : ಸಂಪ್ರದಾಯದಂತೆ ಮದುವೆ ನಡೆಯಬೇಕಾದರೆ ಮಧ್ಯವರ್ತಿಯೊಬ್ಬ ಬೇಕು. ಈತ ವಧೂವರರ ಪೋಷಕರನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ವಿಹಾರಗಳಲ್ಲಿ ಸಂಧಿಸಿ ಈ ವಿಷಯದ ಬಗ್ಗೆ ಚರ್ಚಿಸಿ ಸಂಬಂಧ ಕಲ್ಪಿಸುತ್ತಾನೆ. ಈ ಮೊದಲ ಹೆಜ್ಜೆಗೆ ಮಿಐ ಎನ್ನುತ್ತಾರೆ. ವಧೂವರರ ಪೋಷಕರು ಒಪ್ಪಿದರೆ ಕೊಡುಗೆ ವಿನಿಮಯ ನಡೆಯುತ್ತದೆ. ಇದಕ್ಕೆ ಯುಇನೊ ಎನ್ನುತ್ತಾರೆ. ಬಟ್ಟೆ, ರೇಷ್ಮೆ, ಅಲ್ಲಕಿ, ಮದ್ಯ ಅಥವಾ ಹಣವನ್ನು ಹೆಣ್ಣು ಗಂಡುಗಳು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ವರನೇ ಈ ವಸ್ತುಗಳನ್ನು ಕಳುಹಿಸಬೇಕಾಗುತ್ತದೆ. ಈ ಹಂತಕ್ಕೆ ನಿಶ್ಚಯಶಾಸ್ತ್ರ ಮುಗಿದಂತೆ.
ಮದುವೆಯಲ್ಲಿ ಧಾರ್ಮಿಕ ವಿಧಿಗಳು ಕಡಿಮೆಯಿದ್ದು ಸಮಾರಂಭ ಸರಳವಾಗಿರುತ್ತದೆ. ವಧುವಿನ ಮದುವೆ ವಸ್ತ್ರಗಳನ್ನು ಮದುವೆ ದಿನದ ಬೆಳಗ್ಗೆ ವರನ ಮನೆಗೆ ಕಳುಹಿಸುತ್ತಾರೆ. ಅದೇ ದಿನ ಸಾಯಂಕಾಲ ವಧುವನ್ನು ವರನ ಮನೆಗೆ ಕರೆ ತಂದು ಪದ್ಧತಿಯಂತೆ ಅವಳಿಗೆ ಮದುವೆ ಉಡುಪು ತೊಡಿಸುತ್ತಾರೆ. ಮದುಮಕ್ಕಳು ಸಮಾರಂಭವನ್ನು (ಸನ್‍ಸನ್‍ಕುಡೊ) ಕೈಗೊಳ್ಳುತ್ತಾರೆ. ಇದರಲ್ಲಿ ಅಕ್ಕಿ ಮದ್ಯವನ್ನು ಒಂಬತ್ತು ಸಾರಿ ವಧೂವರರು ವಿನಿಮಯ ಮಾಡಿಕೊಳ್ಳುತ್ತಾರೆ. ವಧೂವರರನ್ನು ಪರಿಚಯಮಾಡಿಕೊಳ್ಳುವುದರ ಮೂಲಕ ಸಮಾರಂಭ ಮುಗಿಯುತ್ತದೆ.

ಅಂತ್ಯಕ್ರಿಯಾ ಸಮಾರಂಭಗಳು ಷಿಂಟೋ ಧರ್ಮದ ಪುರೋಹಿತರಿಂದ ನೆರವೇರುತ್ತವೆ. ಸುಡುವ ಹಾಗೂ ಹೂಳುವ ಎರಡೂ ಪದ್ಧತಿಗಳಿವೆ. ಬೌದ್ಧರು ಹೂಳುವಾಗ ಹೆಣವನ್ನು ಪದ್ಮಾಸನದಲ್ಲಿ ಕೂರಿಸಿ ಪ್ರಾರ್ಥನೆ ಸಲ್ಲಿಸಿ ತರುವಾಯ ಮಣ್ಣು ಮುಚ್ಚುತ್ತಾರೆ. ಮೂವತ್ತು ದಿನಗಳಿಂದ ಹದಿಮೂರು ತಿಂಗಳವರೆಗೆ ಶೋಕವನ್ನು ಆಚರಿಸುತ್ತಾರೆ. ಚೀನದಲ್ಲಿರುವಂತೆ ಬಿಳಿಯ ಬಣ್ಣದ ವಸ್ತುಗಳು ಇವರಲ್ಲೂ ಶೋಕದ ಸಂಕೇತ.

9 ನೃತ್ಯಗಳು : ಜನಪ್ರಿಯ ನೃತ್ಯ (ಒಡೊರಿ) ಮತ್ತು ಶಾಸ್ತ್ರೀಯ ನೃತ್ಯ (ಮೆಯ್) ಎಂಬ ಎರಡು ಬಗೆಯ ನೃತ್ಯಗಳಿವೆ. ಶಾಸ್ತ್ರೀಯ ನೃತ್ಯ ಮಂದ ಚಲನೆಗಳಿಂದ ಕೂಡಿರುತ್ತದೆ. ಬುಗಕು ಎಂಬುದು ಪ್ರಮುಖ ಶಾಸ್ತ್ರೀಯ ನೃತ್ಯವಾಗಿದ್ದು ಹಿಂದೆ ರಾಜರ ಆಸ್ಥಾನಗಳಲ್ಲಿ ಬಳಕೆಯಲ್ಲಿತ್ತು. ಸುಮಾರು ನೂರ ಆರುವತ್ತು ಬಗೆಯ ಬುಗಕುಗಳಿದ್ದು ಅವು ಭಾರತ, ಚೀನ, ಕೊರಿಯ ಮತ್ತು ಟಿಬೆಟ್‍ಗಳ ಪ್ರಾಚೀನ ಸಂಗತಿಗಳನ್ನು ನಿರೂಪಿಸುತ್ತವೆ.

ಸೂರ್ಯದೇವತೆ ಗುಹೆಯಿಂದ ಹೊರಬರುವಂತೆ ಮಾಡಲು ಉಜûುಮೆ ದೇವತೆ ಮಾಡಿದ ಕಗುರು ಎಂಬ ನೃತ್ಯದಿಂದ ನೃತ್ಯಕಲೆ ಹುಟ್ಟಿತೆಂದು ಹೇಳುತ್ತಾರೆ. ಈಗಲೂ ದೇವಸ್ಥಾನಗಳಲ್ಲಿ ಕಗುರು ನೃತ್ಯ ಬಳಕೆಯಲ್ಲಿದೆ.

ಜನಪ್ರಿಯ ನೃತ್ಯ ಒಡೊರಿ ಹಳ್ಳಿಗಳಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿದೆ. ಇದರಲ್ಲಿ ಮುಖ್ಯವಾದ ನೃತ್ಯ ಒ-ಬೊನ್ ಹಬ್ಬದಲ್ಲಿ ನಡೆಯುತ್ತದೆ. ಹೆಂಗಸರು ಗಂಡಸರು ಸುತ್ತುಗಟ್ಟಿ ಹಾಡುಗಳನ್ನು ಹೇಳುತ್ತ ತಮಟೆ ಕೊಳಲು ಮುಂತಾದ ವಾದ್ಯಗಳೊಂದಿಗೆ ಈ ಬಗೆಯ ನೃತ್ಯವನ್ನು ಮಾಡುತ್ತಾರೆ. 							(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ